ಮಂಗಳವಾರ, ಫೆಬ್ರವರಿ 3, 2009

ಶಂಭು ಹೆಗಡೆ ಇನ್ನಿಲ್ಲ;ಕಲಾವಿದನಿಗೆ ಇಂಥ ಸಾವು ಸಿಗುವುದೇ?


ರಾಜ್ಯದ ಹೆಮ್ಮೆಯ ಯಕ್ಷಗಾನ ಕಲಾವಿದ ರಾಜ್ಯ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಇಂದು ಬೆಳಗಿನ ಜಾವ ತವರು ಜಿಲ್ಲೆ ಉತ್ತರಕನ್ನಡ ಜಿಲ್ಲೆಯಲ್ಲಿ ನಿಧನರಾದರು.
ಯಕ್ಷಗಾನ ಸಾರಸ್ವತ ಲೋಕಕ್ಕೆ ತಮ್ಮ ಜೀವವನ್ನೇ ಮುಡುಪಾಗಿಟ್ಟಿದ್ದ ಶಂಭು ಹೆಗಡೆ ಅವರು,ತಮ್ಮ ನಿಧನದಲ್ಲೂ ಯಕ್ಷಗಾನ ಬಿಡಲಿಲ್ಲ.ದೇವರಿಗೂ ಅವರನ್ನು ಹಾಗೆ ಕರೆದುಕೊಂಡು ಹೋಗಲು ಮನಸಿರಲಿಲ್ಲವೇನೊ?. ನಿನ್ನೆ ರಥ ಸಪ್ತಮಿಯ ಅಂಗವಾಗಿ ತಮ್ಮ ಹುಟ್ಟೂರಿನ ಸನಿಹ ವಿರುವ ಇಡಗುಂಜಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರೆ ನಡೆದ ಅವರದ್ದೇ ಮೇಳದ [ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ] ಯಕ್ಷಗಾನದಲ್ಲಿ ಪಾತ್ರ ಹಾಕಿ, ಯಕ್ಷಗಾನ ಕುಣಿಯುತ್ತಿದ್ದಾಗಲೇ ಕುಸಿದು ಬಿದ್ದು ತಮ್ಮ ಬದುಕಿಗೆ ಇತಿಶ್ರೀ ಹಾಡಿದರು.ಒಬ್ಬ ಕಲಾವಿದ ಇಂಥ ಸಾವನ್ನೇ ಅಲ್ಲವೇ ಅಪೇಕ್ಷೀಸುವುದು?ತಮ್ಮ ಜೀವವನ್ನೇ ಮುಡುಪಾಗಿಟ್ಟ ಕ್ಷೇತ್ರದಲ್ಲಿ ತನ್ಮಯತೆ ಯಿಂದ ಕೆಲ್ಸ ಮಾಡುತ್ತಿದ್ದಾಗ ಅದೇಷ್ಟು ಜನರಿಗೆ ಇಂಥ ಭಾಗ್ಯ ಸಿಕ್ಕಿತೊ?

ನಿನ್ನೆ ರಾತ್ರೆ ಇಡಗುಂಜಿಯಲ್ಲಿ ನಡೆದ ಯಕ್ಷಗಾನದಲ್ಲಿ "ಲವ-ಕುಶರ ಕಾಳಗ" ದಲ್ಲಿ ರಾಮನ ಪಾತ್ರವನ್ನು ಹಾಕಿದ್ದ ಅವರು ಕೊನೆಯ ೧೦ ನಿಮೀಷದಲ್ಲಿ ಪ್ರದರ್ಶನ ಮುಗಿಯ ಬೇಕೆಂದಾಗ ನಿಧನರಾದರು.ವಾಲ್ಮಿಕಿ ಯ ಪ್ರವೇಶವಾಗಿ, ರಾಮ ಲವ-ಕುಶರು ತನ್ನ ಮಕ್ಕಳು ,ಅವರ ಸಾಹಸ ಕೌಶಲ್ಯವನ್ನು ಬಣ್ಣಿಸುವಾಗ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದರು

ಶಂಬು ಹೆಗಡೆ ಅವರಿಗೆ ಯಕ್ಷಗಾನದ ಗೀಳು ರಕ್ತಗತವಾಗೇ ಬಂದಿದ್ದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪ ಕೆರೆಮನೆಯಲ್ಲಿ ಜನನ.ಅವರ ತಂದೆ ಶಿವರಾಮ ಹೆಗಡೆ ಇಡಗುಂಜಿ ಮೆಳ ಕಟ್ಟಿ ಯಕ್ಷಗಾನಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭದ್ರಬುನಾದಿ ಹಾಕಿದರು.
ಕಳೆದವರ್ಷದವರೆಗೂ ಯಕ್ಷಗಾನ ಮತ್ತು ಜಾನಪದ ರಾಜ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಇವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ,೨೦೦೧-೦೨ ರಲ್ಲಿ ಪರ್ವ ಚಲನಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಮುಂತಾದ ಪ್ರಶಸ್ತಿ ಬಂದಿತ್ತು.ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.

ಯಕ್ಷಗಾನ ಜನರಿಂದ ದೂರವಾಗುತ್ತಿದ್ದ ಸಂದರ್ಭದಲ್ಲಿ ಸಾಂಪ್ರದಾಯಕತೆಯನ್ನು ಬಿಡದೆ ಯಕ್ಷಗಾನ ಜನರಿಗೆ ಮತ್ತೆ ರುಚಿಸುವಂತೆ ಮಾಡಿದ್ದರು.

ಯಕ್ಷಗಾನದ ಮತ್ತೊಂದು ಶ್ರೀಮಂತ ಕೊಂಡಿ ಕಳಚಿದೆ.ಕೌರವ,ಕಿಚಕ,ನಳ,ಬಲರಾಮ,ಜರಸಂಧ,ದುರ್ಯೋಧನ
ಸಂಧಾನ ಕ್ರುಷ್ಣ ಪಾತ್ರಗಳಲ್ಲಿ ಸಾಟಿ ಇಲ್ಲದ ಅಭಿನಯ ಇವರದಾಗಿತ್ತು.ಅದೇಕೊ ಶಂಭು ಹೆಗಡೆ ಅವರು ಇಲ್ಲದ ಯಕ್ಷಗಾನ ಬಡವಾಗಿದೆ.